ಏರಿಯನ್ ತತ್ತ್ವ: ಕ್ರಿಸ್ತ ದೈವಾಂಶ ಸಂಭೂತನೇ ಹೊರತು ದೇವರೇ ಅಲ್ಲ ಎಂದು ಹೇಳುವ ಒಂದು ಪಂಥದ ತತ್ತ್ವಸರಣಿ. ಇದನ್ನು ಪ್ರತಿಪಾದಿಸಿದವ ಅಲೆಕ್ಸಾಂಡ್ರಿಯದಲ್ಲಿ ಪ್ರ.ಶ. 4ನೆಯ ಶತಮಾನದಲ್ಲಿದ್ದ ಏರಿಯಸ್ ಎಂಬ ಕ್ರೈಸ್ತ ತಾತ್ತ್ವಿಕ. ಏರಿಯಸ್ಗಿಂತ ಮುಂಚೆ ಲೂಷಿಯನ್ನನ ಬರೆವಣಿಗೆಗಳಲ್ಲಿ ಬೀಜರೂಪವಾಗಿ ಈ ಭಾವನೆ ವ್ಯಕ್ತವಾಗಿದೆಯಾದರೂ ಅದನ್ನು ಸ್ಪಷ್ಟವಾಗಿ ಯಾರೂ ಘೋಷಿಸಿರಲಿಲ್ಲ. ಏರಿಯಸ್ ಅದನ್ನು ಘಂಟಾಘೋಷವಾಗಿ ಸಾರಿದ್ದರಿಂದ ಆ ತತ್ತ್ವ ಅವನದೇ ಎಂಬ ನಂಬಿಕೆಗೆ ಅವಕಾಶವಾಯಿತು. ಕ್ರಿಸ್ತ ದೇವರೆಂದೇ ನಂಬಿದ್ದ ಜನ ಏರಿಯಸ್ಗೆ ಬಹಿಷ್ಕಾರ ಹಾಕಿದರು (319). ಹಾಗೆಯೇ ಅನೇಕ ಬಿಷಪರು ಏರಿಯಸ್ನ ಪಕ್ಷವನ್ನು ಸಮರ್ಥಿಸಿ ವಿವಾದ ಹೂಡಿದರು. ಈ ವಿಚಾರವಾಗಿ ತೀರ್ಮಾನ ಕೊಡಲು ಕಾನ್ಸ್‌ಟ್ಯಾಂಟೈನ್ ಒಂದು ಸಮಿತಿಯನ್ನು ಏರ್ಪಡಿಸಿದ. ಈ ಸಮಿತಿಯವರು ಪವಿತ್ರಾತ್ಮನ ಸತ್ತ್ವವೂ ಕ್ರೈಸ್ತನ ಸತ್ತ್ವವೂ ಒಂದೇ ಆದುದರಿಂದ ಕ್ರಿಸ್ತ ದೇವರೇ ಹೊರತು ಮಾನವನಲ್ಲವೆಂದು ತೀರ್ಪುಕೊಟ್ಟರು.
ಆದರೂ ಏರಿಯಸ್ನ ವಾದ ಅಡಗಲಿಲ್ಲ. ಅದು ಪುನಃ ಜನಮೆಚ್ಚಿನ ಭಾವನೆಯಾಯಿತು. ಪ್ರ.ಶ. 381ರಲ್ಲಿ ಅದನ್ನು ವಿಮರ್ಶಿಸಲು ಕಾನ್ಸ್‌ಟ್ಯಾಂಟಿನೋಪಲ್ನಲ್ಲಿ ಇನ್ನೊಂದು ಸಮಿತಿಯನ್ನು ರಚಿಸಲಾಯಿತು. ಅದೂ ಏರಿಯನ್ ತತ್ತ್ವಕ್ಕೆ ವಿರುದ್ಧವಾಗಿಯೇ ತೀರ್ಪುಕೊಟ್ಟಿತು. ಈ ವಾದ ಅಲ್ಲಿಗೇ ಮುಕ್ತಾಯವಾಯಿತೆಂದು ಹೇಳಲಾಗುವುದಿಲ್ಲ. ಇದರ ಅನುಯಾಯಿಗಳು ಈಗಲೂ ಇದ್ದಾರೆ.	 (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ